ವಿಲಾಸಿ
- ಅವಿನಾಶ್ ಲಕ್ಷ್ಮಯ್ಯ

- Nov 13, 2024
- 1 min read
Updated: Nov 14, 2024
ಇಳಿಸಂಜೆ ಬಾನೆಲ್ಲಾ
ನಾಚಿ ಕೆಂಪೇರಿತ್ತು,
ಚಂದಿರನ ಆಗಮನ
ಇಂದೆ ಹೊತ್ತಾಗಿತ್ತು..
ತಂಗಾಳಿ ತುಂಬೆಲ್ಲಾ
ನಿಶ್ಯಬ್ದ ಪ್ರೇಮ,
ಆಹ್ವಾನವಿಟ್ಟಿತ್ತು, ನೀ ಮುಡಿದ
ಮಲ್ಲಿಗೆಯ ಘಮ..
ಮಂದ ಬೆಳಕಿನಲಿ
ಮಂಕಾಗಿದ್ದನಾ ಚಂದಿರ,
ನಿನ್ನ ನಗುವಿನ ಸ್ವರವ
ಕೇಳುವುದೇ ಅವನಾತುರ..
ಕಟ್ಟಿ ಹೇಳುವೆಯಾ ನನಗೆ
ಚಂದಮಾಮನ ಕಥೆಯ,
ಮಡಿಲ ಸೇರುವೆ ಆಗ
ಕೊಂಚ ಇಣುಕಲಿ ಪ್ರಣಯ..
ಅಲೆಮಾರಿ ಮನಸಿಗೆ, ನಿನ್ನ
ಉಸಿರ ಸೋಕಿಸು ಒಮ್ಮೆ,
ಇರುವುದೊಂದೇ ಹೃದಯ
ಮಿಡಿತ ಮರೆವುದು ಕ್ಷಣಕೊಮ್ಮೆ..
ದೃಷ್ಟಿ ತೆಗೆದಿವೆ ನೋಡು
ಜೋಡಿಯಲಿ ಜುಮುಕಿ,
ಹಿಂಬಾಲಿಸದೇ ವಿಧಿಯಿಲ್ಲ
ಕರೆದಿರಲು ಧುಮುಕಿ..
ಹಳೆಯ ಪುಟಗಳ ನೆನೆದು
ಮರೆತೆ ಹೊಸದೊಂದು ಸಾಲು,
ತುಟಿಯ ಮೇಲಿನ ಮೌನ
ಮೆಲ್ಲ ಕದಿಯಲೆ ಹೇಳು..
ಸತಾಯಿಸಲೆಂದೆ ಬಳುಕಿ ಬೀಗುವೆಯಲ್ಲ
ಎಷ್ಟು ಸರಿಯೇ ನಿನಗೆ..?
ನೆನ್ನೆ ಕನಸುಗಳೇ ಮಾಗಿಲ್ಲಾ
ಹೊಸದ ಹೊಸೆಯಲಿ ಹೇಗೆ..!
ತೋಳ ಹೊದಿಕೆಯ ಬಯಸಿ
ವಿಲಾಸಿಯಾಗಿದೆ ಮನಸು,
ತೀರಾ ಖಾಸಗಿ ಮಾತೊಂದಿದೆ
ಹುಸಿ ಮುನಿಸಲಿ ನೀ ಶಪಿಸು..
ಬೆಳದಿಂಗಳು ಕರಗುವ ಮುನ್ನ
ಹೊಗಳಲಿ ಎಷ್ಟು, ನನ್ನರಸಿ ಸೊಗಸು,
ಬೆಳಕು ಮೂಡದಿದ್ದರೆ ಅದುವೆ,
ಸೋಜಿಗದ ಕನಸು..!!

Comments