ಅವಳು, ತಡವಾಗಿ ಬಂದ ಸ್ವಾತಿ ಮಳೆ..!
- ಅವಿನಾಶ್ ಲಕ್ಷ್ಮಯ್ಯ

- Aug 23
- 1 min read
ಅವಳು,
ತಡವಾಗಿ ಬಂದ ಸ್ವಾತಿ ಮಳೆ..!
ಎಲ್ಲಿಯೊ ಹೊರಟ್ಟಿದ್ದ ತಂಗಾಳಿ
ದಾರಿ ಬದಲಿಸಿದ ಹಾಗೆ,
ಅಪರಿಚಿತ ಭೇಟಿಯೊಂದು
ಪರಿಚಿತನಾಗಿಸಿತಾ ನಗೆ..
ಭೋರ್ಗರೆಯಲಿಲ್ಲ, ಜಡಿಯಂತಲ್ಲ
ತುಂತುರಂತಿದ್ದವು ಮಾತುಗಳು,
ಅಷ್ಟೇ ಸಾಕಿತ್ತಲ್ಲವೇ,
ಸ್ನೇಹದ ಮೊಳಕೆಯೊಡೆಯಲು…
ಅವಳು,
ತಡವಾಗಿ ಬಂದ ಸ್ವಾತಿ ಮಳೆ..!
ಜೊತೆ ನೆಡೆದಂತೆಲ್ಲಾ
ಸನಿಹ ಹೆಚ್ಚಿಸಿತು ಘಳಿಗೆ,
ಸಲಿಗೆ ಬೇರೂರಿತ್ತು
ಆ ಪಯಣದ ಒಳಗೆ..
ಆಸಕ್ತಿಯೊ ಆಕರ್ಷಣೆಯೊ
ಬಯಕೆ ಬೇಡಿತ್ತು ಸಾಂಗತ್ಯ,
ಮೊಡ ಕವಿದಾಗಿತ್ತು,
ಶುರುವಾಯ್ತು ಪ್ರೀತಿ ವ್ಯವಸಾಯ..
ಅವಳು,
ತಡವಾಗಿ ಬಂದ ಸ್ವಾತಿ ಮಳೆ..!
ಅವಳೊ, ಹುಣ್ಣಿಮೆಯ
ಎರಕ ಹೊಯ್ದಂತ ಚಲುವು,
ಕಂಗಳವು ಹಿಮಪಾತ,
ಮನಸು ಸರೋವರವು..
ಅವಳು ಅರಳೆಂದಾಗ, ಅರಳಿ
ಸೂಸುವುದು ಮಲ್ಲಿಗೆಯ ಘಮವು,
ಮುತ್ತಾಗ ಬಂದ ಆ ಮೊದಲ ಹನಿಗೆ
ಕಾದಿತ್ತು ಮನವು…
ಅವಳು,
ತಡವಾಗಿ ಬಂದ ಸ್ವಾತಿ ಮಳೆ..!
ನವಿಲಾಗಿ ಕುಣಿಸಲು ಅವಳ
ಹಸಿರೆ ನಾಚಿ ತೂಗುವುದು..
ಸಂಜೆಗೆಂಪಿನ ಸೂರ್ಯ,
ತುಸು ಕಾದು ನೋಡಿಯೇ ಹೋಗುವುದು..
ಪಾರಿಜಾತದ ಹೃದಯದವಳು,
ಅಸೂಯೆ ಹುಟ್ಟಿಸೊ ಪ್ರೇಮಿ ಅವಳು..
ಕೃಷ್ಣನೇ ಪುಣ್ಯ ಹೊರಬೇಕು
ಪಡೆಯಲು, ಇವಳು
ರಾಧೆಯಂತವಳು..!
ಅವಳು,
ತಡವಾಗಿ ಬಂದ ಸ್ವಾತಿ ಮಳೆ..!

Comments