ರೂಪಾಯಿ
- ಅವಿನಾಶ್ ಲಕ್ಷ್ಮಯ್ಯ

- Oct 20, 2024
- 1 min read
Updated: Oct 27, 2024

ರೂಪವು ಹಲವು ಬಣ್ಣವು ಹಲವು
ಹೆಸರದು ಒಂದೇ ರೂಪಾಯಿ..
ಗಳಿಸುವ ಕೈಗಳ ಬಣ್ಣವು ಹಲವು
ಬೆಲೆಯದು ಒಂದೇ ರೂಪಾಯಿ..
ದುಡಿಯುವ ಕಪ್ಪನೆ ಕೈಗಳ ಸೇರಿ
ಹೊಳೆವುದು ಬೆಳ್ಳನೆ ರೂಪಾಯಿ..
ಐಶಾರಾಮಿಯ ಜಗಮಗದಲ್ಲಿ
ಕಾಣದು ಕಪ್ಪನೆ ರೂಪಾಯಿ..
ತುತ್ತಿಗೆ - ತೊಟ್ಟಿಗೆ, ಹೊರಯಲು ಹೊಟ್ಟೆಗೆ
ಇಂಧನ, ಈ ಧನ ರೂಪಾಯಿ..
ಜುಟ್ಟಿಗೆ ಬಟ್ಟೆಗೆ, ತೋರಿಕೆ ಲೊಟ್ಟೆಗೆ
ಓಡುವ ಕುದುರೆಯು ರೂಪಾಯಿ..
ಉಳ್ಳವರೆಡೆಗೆ ಬೆಚ್ಚೆನೆ ಮನೆಗೆ
ಸೇರುವ ಚೆಂಚೆಲೆ ರೂಪಾಯಿ..
ಹಸಿದರೆ ನೆಲವನು, ದಣಿದರೆ ಮುಗಿಲನು
ನೋಡೋರ ಮರೆವಳು ರೂಪಾಯಿ..
ಅರಿವಿನ ಕಣ್ಣನು ಮುಚ್ಚಿಸಬಲ್ಲದು
ಮಾಯದ ಮಗಳು ಈ ರೂಪಾಯಿ..
ಬಡತನದ ಆ ತಣ್ಣನೆ ಕನಸಲಿ
ಗಿರ ಗಿರ ತಿರುಗುವಳೀ ರೂಪಾಯಿ..

Comments