ಮುಂಜಾವು
- ಅವಿನಾಶ್ ಲಕ್ಷ್ಮಯ್ಯ

- Oct 20, 2024
- 1 min read
ಮುಂಜಾನೆ ಮೋಡಗಳ
ಕೆಂಪನ್ನು ಕಸಿದು..
ನೆಡೆದು ಬಂದಳು ನೀರೆ
ನೆರಿಗೆಯನು ಹಿಡಿದು..
ನಿನ್ನ ಬಳಸಿದೆ ಸೀರೆ
ನಡುವಿನಾಸರೆ ಪಡೆದು..
ನಗಿಸಿದೆ ಚುಕ್ಕಿಗಳ
ನಿನ್ನಂದ ಬಸಿದು..
ಚಾವಣಿಯ ಮೇಲೇರಿ
ಬೆಳೆದ ಮಲ್ಲಿಗೆ ಬಳ್ಳಿ..
ಅಲ್ಲೆ ಕಾಯುತ ಹಾಡಿವೆ
ಗುಬ್ಬಿ ಮಿಂಚುಳ್ಳಿ..
ಕೈಬೆರಳು ಆಡುತಿವೆ
ರೇಖೆಗಳ ಬರೆದು..
ಅದ ನೋಡಲು ಬಂತು
ಹಾರಿ ಇನ್ನೆರಡು..
ಬಣ್ಣಗಳು ನೆಂದವು
ಆ ಚಳಿಯ ತಂಪಿಗೆ..
ತುಂಬದಾ ರಂಗೋಲಿ
ಕೆರಳಿಸಿತು ಕೊನೆಗೆ..
ಮುನಿಸು ಮಾಡುವೆ ಏಕೆ
ಬಡಪಾಯಿ ಮಂಜಿಗೆ..
ಸೋಲುವುದೆ ಅದು ಹೇಗು
ತಂತಾನೆ ನಿನಗೆ..
ಇದಕಿಂತ ಮುದ್ದಿನ
ಮುಂಜಾವೆ ಇಲ್ಲಾ..
ನೀ ನಗುವಾಗ, ಬೇಕಿಲ್ಲ
ಆಹ್ವಾನವೆಲ್ಲಾ..
ಎಳೆ ಬಿಸಿಲು ಜಾರಿತು
ಅಂಗಳದಲೆಲ್ಲಾ..
ನಿನ್ನಂದ ಕಾಣುತಲಿ
ಮರೆತೆ ನಾನೆಲ್ಲಾ..

Comments