ನಾನು, ಮಳೆ ಮತ್ತು ಅವಳು
- ಅವಿನಾಶ್ ಲಕ್ಷ್ಮಯ್ಯ

- Oct 20, 2024
- 1 min read
ಮೂವರಿದ್ದೆವು ನಾವು
ಖಾಲಿ ಪಯಣದ ಒಳಗೆ..
ಮೌನ ಮಾತ್ರವೆ ಇತ್ತು
ಜಂಟಿ ಕಂಗಳ ಒಳಗೆ..
ದ್ವಂದ್ವ ಮನಗಳ ನಡುವೆ
ಒಂಟಿ ಮಳೆಯದೆ ಮಾತು..
ಸಲುಗೆ ತರಿಸಲು ಸೋತು
ನಮ್ಮ ಬೈಯುತಲಿತ್ತು..
ಅವಳ ಹೃದಯದ ಓಟ
ನನ್ನ ಕಿವಿಯಲಿ ಬಿತ್ತು..
ಅಂಜಿ ನಡುಗಿದ ಕೈ
ಅವಳ ಹೆಗಲೇರಿತ್ತು..
ದೂರ ನೋಟದವರೆಗು
ದಾರಿ ಕಡಲಂತಿತ್ತು..
ನಮ್ಮ ನೋಟಗಳೋಳಗೆ
ನಾವು ಮುಳುಗಾಗಿತ್ತು..
ಬೀಳೊ ಮುತ್ತಿನ ಮಳೆಯ
ಏಟು ನಡುಗಿಸುತಿತ್ತು..
ಹೆದರೊ ತುಟಿಯೊಳಗೊಂದು
ಮಾತು ಅವಿತಂತಿತ್ತು..
ಅವಳ ಕಣ್ಣಿನ ಬಣ್ಣ
ನನ್ನ ಎದೆಯೊಳಗಿತ್ತು..
ಬಿಡಿಸಲಾಗದ ಕನಸು
ನಾನು, ಮಳೆ ಮತ್ತು ಅವಳೊಳಗಿತ್ತು!!!

Comments