ಚಂದಮಾಮನೂ ಮಲಗಿದ್ದಾನೆ..
- ಅವಿನಾಶ್ ಲಕ್ಷ್ಮಯ್ಯ

- Oct 27, 2024
- 1 min read
ಚಂದಿರನ ಸುತ್ತ ನೀ
ಬೆಳದಿಂಗಳಂತಾಡಿ,
ಕತ್ತಲೆಗು ಹೊತ್ತಾಯ್ತು..
ಮಲಗು ಬಾರೆ ಕಂದ,
ಚಂದಮಾಮನೂ ಮಲಗಿದ್ದಾನೆ..!
ಬಾಕಿ ಉಳಿದಿರೊ ಆಟ
ನಾಳೆಗದು, ನಿನ್ನ ಹಾರಾಟ
ಮುನಿಸು ಮಾಡಲು ಬೇಡ
ಲಾಲಿಯಿದೆ ಕತೆಯಲ್ಲೆ..
ಮಲಗು ಬಾರೆ ಕಂದ,
ಚಂದಮಾಮನೂ ಮಲಗಿದ್ದಾನೆ..!
ಕಟ್ಟಿ ಹೇಳುವ ಕತೆಗೆ
ಮೊದಲು ಕೊನೆಗಳೆ ಇಲ್ಲ,
ತಟ್ಟಿ ಮುದ್ದಿಸುವೆ
ನನ್ನ ಜೋಳಿಗೆಯ ಕನಸಲ್ಲೇ..
ಮಲಗು ಬಾರೆ ಕಂದ,
ಚಂದಮಾಮನೂ ಮಲಗಿದ್ದಾನೆ..!
ಕುಣಿದು ಕುಪ್ಪಳಿಸುವೆ
ಘಳಿಗೆ ಬಿಡುವನು ಕೊಡದೆ
ಪುಟ್ಟ ಪಾದದ ದಣಿವ
ಒತ್ತಿ ನೇವರಿಸುವೆ..
ಮಲಗು ಬಾರೆ ಕಂದ,
ಚಂದಮಾಮನೂ ಮಲಗಿದ್ದಾನೆ..!
ಕತ್ತಲೆಗೆ ಕಣ್ಣೊಡ್ಡಿ
ಗುಮ್ಮನಿಗೆ ಅಂಜದಿರು,
ಅಪ್ಪನಿರುವನು ಜೊತೆಗೆ
ಕಾವಲಿದೆ ನಿನ್ನ ಕರೆಗೆ..
ಮಲಗು ಬಾರೆ ಕಂದ,
ಚಂದಮಾಮನೂ ಮಲಗಿದ್ದಾನೆ..!
ಸಕ್ಕರೆಯ ಗೊಂಬೆಗೆ
ಅಕ್ಕರೆಯ ಸಿಹಿಯಿಟ್ಟು,
ಚುಕ್ಕಿ ಕಂಗಳ ಒಳಗೆ
ನಗುವೊಂದ ಬಚ್ಚಿಟ್ಟು..
ಮಲಗು ಬಾರೆ ಕಂದ,
ಚಂದಮಾಮನೂ ಮಲಗಿದ್ದಾನೆ..!

Comments