ಕರುನಾಡು
- ಅವಿನಾಶ್ ಲಕ್ಷ್ಮಯ್ಯ

- Oct 31, 2024
- 1 min read
ನಮ್ಮ ನಾಡಿದು ನಮ್ಮದು
ಚೆಲುವ ಕನ್ನಡ ನಾಡಿದು..
ಕಲೆ ಸಂಸ್ಕೃತಿ ಹಿರಿಮೆ ಮೆರೆದ
ಕನ್ನಡಿಗರ ನಾಡಿದು..
ಗಂಗ ಮೌರ್ಯ ಕದಂಬ ಹೊಯ್ಸಳ
ಚಾಲುಕ್ಯರಾಳಿದ ನಾಡಿದು..
ಕಲ್ಲ ಗರ್ಭದಿ ಕಮಲವರಳಿದ
ಶಿಲ್ಪ ಕಲೆಯಾ ಬೀಡಿದು..
ಮರೆಯಲಾಗದು ಸಿರಿಯ ಚೆಲ್ಲಿದ
ವಿಜಯನಗರದ ವೈಭವ..
ನಾಡ ಘನತೆಯ ಸಾರಿ ಹೇಳುವ
ನಮ್ಮ ದಸರೆಯ ಕಲರವ..
ಧೈರ್ಯ ಸಾಹಸ ಗುಣಗಳೆಲ್ಲವು
ತುತ್ತು ಅನ್ನದಿ ಬೆರೆತಿವೆ..
ನಿಷ್ಟೆ ಪ್ರೇಮ ಶಾಂತಿ ದಯೆಯು
ತಾಯ ಹಾಲೊಳೆ ಬಂದವೆ..
ಮುಗಿಲ ಹೊಸಿಲಲಿ ಬಾಗಿ ನಿಂತಿದೆ
ಹಸಿರ ಕಾನನ ಬಿಲ್ಲಿದು..
ಸಹ್ಯಾದ್ರಿ ಸಾಲನು ಸವರಿ ಸಾಗಿದೆ
ತಿಳಿ ನೀಳ ನೀರಲಿ ಬೆರೆತದು..
ಬಣ್ಣ ಬಣ್ಣದ ಒಳಗು ಒಂದಿದೆ
ಹಿರಿಯರಾಡಿದ ಮಾತದು..
ಕುವೆಂಪು ಬೇಂದ್ರೆ, ಮಾಸ್ತಿ ಕಾರಂತರು
ಕಲಿಸಿ ಹೇಳಿದ ನುಡಿಯದು..
ದಾಸ ಶರಣರು ಸಂತರೆಲ್ಲರು
ಹರಸಿ ಹಾಡಿದ ನಾಡಿದು..
ಎಲ್ಲರೊಂದೇ ಎನ್ನೋ ತತ್ವವ
ಇಂದೂ ಪಾಲಿಸೊ ಮಣ್ಣಿದು..
ಹಾಡೊ ಕೋಗಿಲೆ ಕಂಠಕೊಂದು
ಕವಿಯ ಸಾಲಿಹುದಿಲ್ಲಿ..
ಮನೆ ಮನವು ತುಂಬುವಂತೆ
ಕನ್ನಡದ ಮಳೆಯಾಗಲಿ..
ನಮ್ಮ ನಾಡಿದು ನಮ್ಮದು
ಚೆಲುವ ಕನ್ನಡ ನಾಡಿದು..
ಮುದ್ದು ಭಾಷೆಯ ಸವಿಯ ಉಣಿಸುವ
ಕನ್ನಡಾಂಬೆಯ ಮಡಿಲಿದು..

Comments