ಕನ್ನಡ
- ಅವಿನಾಶ್ ಲಕ್ಷ್ಮಯ್ಯ

- Oct 31, 2024
- 1 min read
ಹಾಡಲಾಗದ ಹಕ್ಕಿಯು ನಾನು,
ಶ್ರೀಗಂಧದೂರಲಿ ಬಂಧಿಯು ನಾನು..
ಕಾಣದ ಕೈಗಳ ಕುಣಿಕೆಗೆ ಸಿಕ್ಕಿಹ
ಕನ್ನಡ ತಾಯಿಯ ಕಂಠವು ನಾನು..
ಅರಸಿ ಬಂದವರ ಆಶ್ರಯ ಕೊಟ್ಟು
ವಲಸೆ ಬಂದವಗೆ ಅನ್ನವನಿಟ್ಟು..
ನೆರೆ ಹೊರೆಯರಿಗೆ ಸಲುಗೆಯ ಕೊಟ್ಟು
ನಮ್ಮವರೆನ್ನುವ ಭಾವನೆ ಇಟ್ಟು..
ಬೆಳೆವುದ ನೋಡಿದೆ ಸಂತಸ ಪಟ್ಟು
ಬೆನ್ನಿಗೆ ನಿಂತೆನು ಗೆಲುವನು ಕೊಟ್ಟು
ಓಡುವ ಕುದುರೆಯ ಲಗಾಮು ಬಿಟ್ಟು
ದೂರವೆ ಉಳಿದೆನು ನಂಬುಗೆ ಇಟ್ಟು..
ನಾನು ನೀನು ಹುಟ್ಟಿದ ಘಳಿಗೆ
ದೂಡಿದರೆನ್ನನು ಕತ್ತಲೆಯೊಳಗೆ..
ಎತ್ತರ ನಿಲ್ಲಲು ಬೇರಿದೆ ಕೆಳಗೆ
ಎನ್ನುವ ಸತ್ಯವ ಮರೆತರು ಕಡೆಗೆ..
ಎಲ್ಲರ ಸಂಗಡ ನೀನಿರುವಲ್ಲಿ
ಮರೆಯುವೆ ಏತಕೊ ನಿನ್ನನೆ ಅಲ್ಲಿ..
ಎದೆಯೇರಿಸಿ ನೀ ಹೊಡೆಯೊ ನಗಾರಿ
ಎಲ್ಲೆಡೆ ಹರಡಲಿ ಕನ್ನಡ ಲಹರಿ..

Comments