ಕೊರವಂಜಿ
- ಅವಿನಾಶ್ ಲಕ್ಷ್ಮಯ್ಯ

- Oct 20, 2024
- 1 min read
ಉಟ್ಟಿರುವ ಸೀರೆಯೊಳು
ಚಿಟ್ಟೆಗಳ ಸಾಲಿಹುದು,
ಕುಪ್ಪಸಕೆ ಚಿನ್ನಾರಿ ಅಂಟಿಹುದು..
ಕೈಲಿರುವ ಬುಟ್ಟಿಯೊಳು
ಕವಡೆಗಳ ಅಂಚಿಹುದು,
ಮಂತ್ರದಂಢವು ಒಂದು ಕೈಲಿಹುದು..
ಕಣ್ತುಂಬ ಕಾಡಿಗೆಯು
ಗಲ್ಲದೊಳು ಚುಕ್ಕಿಯು,
ನಡುಹಣೆಯ ತುಂಬಿದೆ ಸಿಂಧೂರ..
ಲಕ್ಷ್ಮಿಯನು ನಡುವಲ್ಲಿ
ಶಾರದೆಯ ನುಡಿಯಲ್ಲಿ,
ಹೊತ್ತು ಬಂದವಳ್ಹೆಸರೆ ಬಂಗಾರ..
ಮೀನಂತೆ ನಡೆವವಳು
ಚಂದಿರನ ನಗುವವಳು,
ಸರಿಸಾಟಿ ಮಾತಿಗೆ ಇರದವಳು..
ಹೂ ಮುಡಿದ ಚಲುವಿವಳು
ಊರಿನ ಮಗಳಿವಳು,
ಗಿಳಿಯಂತೆ ಮಾತಾಡೊ ಗುಣದವಳು..
ಕಣಿ ಹೇಳುತೀನಮ್ಮ
ಕಣಿ ಹೇಳುತೀನಮ್ಮ,
ಕೈನೀಡಿ ಕಣಿ ಕೇಳೆ ನೀ ಗೌರಿ..
ಮುಂಬರುವ ಯೋಗವನು
ಇಂದೇನೆ ಹೇಳುವೆನು,
ಅಮ್ಮ ನುಡಿವಳು ಕೇಳೆ ಸಿರಿ ಗೌರಿ..
ಲಕ್ಕವ್ವ ನುಡಿದವಳೆ
ಭಾಗ್ಯವನು ತಂದವಳೆ,
ಮನೆ ಬಾಗಿಲಲೆ ಬಂದು ನಿಂತವಳೆ..
ಅರಿಶಿನ ಕುಂಕುಮದಿ
ಅವಳ ಪೂಜಿಸು ನೀನು,
ಸೆರಗೊಡ್ಡಿ ಕೇಳುವುದ ಕೊಡುತಾಳೆ..
ಕೊರವಂಜಿ ಮಾತ ನೀ
ತೆಗೆಯ ಬೇಡವೆ ತಂಗಿ,
ನಿನ್ನಂತರಂಗವನು ನಾ ಬಲ್ಲೇ..
ಮಡಿಲು ತುಂಬುವ ಕಾಲ
ಹತ್ತಿರವೆ ಇದೆ ತಂಗಿ,
ಸುಳ್ಳಲ್ಲ ಶಿವನಾಣೆ ನೀ ಕೇಳೆ..

Comments