ರೇಡಿಯೋ ಗೆಳೆಯ
- ಅವಿನಾಶ್ ಲಕ್ಷ್ಮಯ್ಯ

- Jan 1, 2025
- 1 min read
ಅಲ್ಲೆಲೊ ಮೂಲೆಯಲಿ ಕೂತ,
ನಿನ್ನ ನೆಚ್ಚಿನ ರೇಡಿಯೋ..
ಹಾಡೊಂದ ಕಲಿತು,
ಕಾಯುತಿದೆ ಕರೆಗೆ..
ನಿನಗೆಂದೇ ನಾ ಬರೆದ
ಆ ಮೊದಲ ಕವನ,
ನೀ ಎದುರು ಕೂತು
ಸಮ್ಮತಿಸ ಬೇಕಿದೆ..!
ಕನ್ನಡಿಯಲೊಂದು, ಪುಟ್ಟ
ಖಾತೆಯೆನು ತೆರೆದು,
ನೀ ನಾಚಿ ನಕ್ಕಾಗೆಲ್ಲಾ
ನೆನಪುಗಳ ಕೂಡಿಡು..
ನೆನಪು ಕಚಗುಳಿಯಿಟ್ಟು
ಕುಣಿವ ಮನಸಾದಾಗ,
ಇವನ ಕಿವಿಯನು ಹಿಂಡಿ
ನೆನಪುಗಳ ಬಳಿಯಿಡು..
ಅದೆಂತದೊ ಅದು,
ಚೆಂದದೊಂದಿತ್ತು ಸಾಲು..
ಅರ್ಧವೇ ಹಾಡಿ, ನುಂಗಿದ
ಇನ್ನರ್ಧ ಪಾಲು..
ನಿನ್ನ ಸನಿಹಕೆ ಸೋತು
ತರಂಗಗಳ ಮರೆತು,
ಕೇಳಿಸದು ಮತ್ತೇನು
ಬಿಸಿಯುಸಿರ ಹೊರೆತು..
ಸಲುಗೆಯಲಿ ಮೈಸವರಿ
ತರಿಸುವೆಯೆಲ್ಲೇ ಮುದ್ದು..
ಭ್ರಮೆಯಲ್ಲಿ ಅವನಿರಲು
ಕಣ್ಣ ಮಿಟುಕಿಸು ಕದ್ದು..
ಶೃಂಗಾರ ಅತಿಯಾಗಿ
ಚೇಷ್ಟೆ ಅನಿಸಿದರೆ ನಿನಗೆ,
ಹುಸಿಕೋಪ ತೋರಿ ನೀ
ಮೆಲ್ಲ ತಟ್ಟು ಹಣೆಗೆ..
ಪದ ನನದು, ಪ್ರೇಮ ನನದು
ಹೃದಯ ಗೆದ್ದವ ಇವನು..
ಎಷ್ಟೆ ಶಪಿಸಿದರು ಏನು,
ನಿನ್ನ ಹತ್ತಿರವೆ ಇಹನು..
ಅಸೂಯೆ ನಮ್ಮಿಬ್ಬರಲು
ಮುಗಿಯದೀ ಪೈಪೋಟಿ..
ಅವನನ್ನೇ ಒರಗಿ, ಹೇಳಿಬಿಡು ಗೆಳತಿ
ಯಾರು ನಿನ್ನಾ, ನಿಜ ಅನುರಾಗಿ..

Comments