ದೇವ್ರ ಲೆಕ್ಕ
- ಅವಿನಾಶ್ ಲಕ್ಷ್ಮಯ್ಯ

- Nov 22, 2024
- 1 min read
Updated: Nov 23, 2024
ಬೆಟ್ಟ ಹತ್ತಿ ಗುಡ್ಡ ಇಳ್ದು
ಮೈಲಿ ಸವೆಸಿದ್ರೇನು,
ಕೈಗೆ ಸಿಗದ ದೇವ್ರ ನೀನು
ಎಲ್ಲಿ ಹುಡ್ಕಿದ್ರೇನು..
ಚಿನ್ನ ಬೆಳ್ಳಿ ಇದ್ದೋರ್ಗೆಲ್ಲ
ಕೋಟಿ ದೇವ್ರು ಇಲ್ಲಿ,
ಅವ್ನ್ ಕೊಟ್ಟಿದ್ನ ಅವ್ನ್ ಹುಂಡೀಗೆ
ತುಂಬೋದ್ರ ಅರ್ಥ ಎಲ್ಲಿ..
ದೇವ್ರು ಏನ್ರ ಬಂದ್ ನಿನ್ನತ್ರ
ಸಾಲ ಕೇಳವ್ನೇನು,
ದಾನ ಧರ್ಮ ತಕೊಂಡ್ ತಕೊಂಡ್
ಪೇಚಾಡ್ತಾವ್ನೆ ಅವ್ನೂ..
ಇರೋರ್ಗೆಲ್ಲಾ ಹೊರೋಕಾಗ್ದೇ
ತುಂಬಿದ್ ಹಂಡೆ ಹೊಟ್ಟೆ,
ಗಲ್ಲೆಗ್ ಒಂದೊಂದ್ ಆಗೋದ್ವಣ್ಣಾ
ಗುಡಿ ಹರಳೀ ಕಟ್ಟೆ..
ಪಾಪ ಸೊರಗ್ಲಿ, ಪುಣ್ಯ ಬರ್ಲಿ
ಅಂತ ಅರ್ಜಿ ಹಾಕಿ,
ತಿಂಗ್ಳಿಗೊಮ್ಮೆ ಯಾತ್ರೆ ಮಾಡ್ತಾರ್
ಉಳುಸ್ದೇ ಏನೂ ಬಾಕಿ..
ದೇವ್ರ ಮುಂದೆ ತಲೆ ತಗ್ಸಿ
ಕಣ್ಣು ಮುಚ್ಕೊಳೋದಲ್ಲಾ,
ಬೇಯ್ತಾ ಇದ್ರು ಬದುಕ್ತಿರೋರ್ನ
ಒಮ್ಮೆ ನೋಡ್ಬೋದಲ್ಲ..
ಜೀವ್ನಕ್ಕೇನೆ ಜೀತಕ್ಕವ್ರೆ
ಕಾಣೋಕ್ ಅನ್ನದ್ ದ್ಯಾವ್ರು,
ಅವ್ನದೇ ನೋಡು ಆ ಹುಂಡೀನು
ತುಂಬ್ರಿ ಅದ್ನು ಚೂರು..
ಮನ್ಸ ಮಾತ್ರ ಮನ್ಸಂಗಾಗೋದ್
ದೇವ್ರು ಅಲ್ಲಾ ಕೇಳು,
ಮನ್ಸತ್ವನ ಉಳುಸ್ಕೊಂಡೋನ
ಮನ್ಸೇ ದೇವ್ರು ಕೇಳು..
ದೊಡ್ಡತನಾನ, ಹಣ ಆಸ್ತೀಲ್
ಅಳೀಲೇ ಬ್ಯಾಡ್ವೊ ಅಣ್ಣ,
ಏಸ್ ಮಂದಿ ನೆನೀತಾರ್ ನಿನ್ನ
ಅನ್ನೋದ್ ಹೇಳ್ತದ್ ಅದ್ನ..
ನಂಬ್ಕೆ ಪ್ರೀತಿ ವಿಸ್ವಾಸಾನೆ
ಉಳಿಯೋ ಗಂಟು ಇಲ್ಲಿ,
ಬ್ಯಾರೇದ್ನೆಲ್ಲಾ ಇಲ್ಲೇ ಬಿಟ್ಟು
ಕಣ್ಮುಚ್ದೋರ್ ಲಿಕ್ಕ ಎಲ್ಲಿ..
ತುಂಬಿದ್ ಕೈಯಿ ಭೂಮಿ ನೋಡ್ಬೇಕ್
ಆಗ್ಲೆ ಬಾಳು ಪಕ್ಕಾ,
ಮನ್ಸ ಮನ್ಸನ್ ಹೆಗಲಾಗ್ಬೇಕು
ಅದೇ ದೇವ್ರ ಲೆಕ್ಕ..

ಕವಿತೆಯ ಎಲ್ಲಾ ಸಾಲುಗಳು ಮನಮುಟ್ಟತ್ತವೆ... ನನಗೆ ಅದರಲ್ಲೂ ಕೊನೆಯ ಎರಡು ಪ್ಯಾರ ಬಹಳ ಮೆಚ್ಚುಗೆಯಾಯಿತು... ನಿಮ್ಮ ಬರವಣಿಗೆ ಮುಂದುವರಿಸಿ.. ಶುಭವಾಗಲಿ🍀